ಕಯೋಟ್ : ಸ್ತನಿಗಳ ವರ್ಗದ ಕಾರ್ನಿವೊರ ಗಣದಲ್ಲಿನ ಕೇನಿಡೀ (ನಾಯಿಗಳ) ಕುಟುಂಬಕ್ಕೆ ಸೇರಿದ ಪ್ರಾಣಿ. ಕೇನಿಸ್ ಲೇಟ್ರನ್ಸ್‌ ಇದರ ವೈಜ್ಞಾನಿಕ ಹೆಸರು. ಇದನ್ನು ಹುಲ್ಲುಗಾವಲಿನ ತೋಳ (ಪ್ರೈರಿ ವುಲ್ಫ್‌) ಎಂದು ಕರೆಯುವುದುಂಟು. ಉತ್ತರ ಅಮೆರಿಕದಲ್ಲಿ ಅಲಾಸ್ಕದಿಂದ ಹಿಡಿದು ಮೆಕ್ಸಿಕೊ ವರೆಗಿನ ಪ್ರದೇಶಗಳಲ್ಲಿ ಹೇರಳವಾಗಿ ಕಾಣಬರುತ್ತದೆ. ಸಾಮಾನ್ಯವಾಗಿ ಬಂiÀÄಲುಗಳಲ್ಲಿ ವಾಸಿಸುವುದು ಹೆಚ್ಚು. ಗಾತ್ರದಲ್ಲಿ ತೋಳಕ್ಕಿಂತ ಚಿಕ್ಕದಾಗಿದೆ. ನರಿಯನ್ನು ಹೆಚ್ಚುಕಡಿಮೆ ಹೋಲುವ ಇದು ಸು. 36" ಉದ್ದ, 12"-15" ಎತ್ತರ ಇದೆ. ತಳಭಾಗ ಬಿಳುಪಾಗಿಯೂ ಇದೆ; ಕಾಲುಗಳು ಕೊಂಚ ಕೆಂಪು ಬಣ್ಣದವು. ಬಾಲದ ತುದಿ ಕಪ್ಪು ಬಣ್ಣದ್ದು; ಕುಚ್ಚಿನಂತಿದೆ. ಬಾಲದ ಬುಡದಲ್ಲಿ ಕಪ್ಪು ಬಣ್ಣದ ಗ್ರಂಥಿಗಳುಳ್ಳ ಪ್ರದೇಶವಿದೆ. ಕಯೋಟ್ ಓಡುವಾಗ ಬಾಲ ಕೆಳಮುಖವಾಗಿ ಬಾಗಿರುತ್ತದೆ. 

ಕಯೋಟ್ ನಿಶಾಚರಿ. ಮಾಂಸಾಹಾರಿಯಾದ ಇದರ ಆಹಾರ ಮೊಲ, ಇಲಿ, ಹೆಗ್ಗಣ, ಅಳಿಲು, ಜಿಂಕೆ, ಬಾತು ಮತ್ತು ಇತರ ಹಕ್ಕಿಗಳು. ಹೊಂಚುಹಾಕಿ ಬೇಟೆಯನ್ನು ಹಿಡಿಯುವುದೇ ಹೆಚ್ಚು. ಕೆಲವು ವೇಳೆ ಅಟ್ಟಿಸಿಕೊಂಡು ಹೋಗಿ ಬೇಟೆಯಾಡಿ ಹಿಡಿಯುವುದೂ ಉಂಟು. ಬೇಟೆಯಾಡುವಾಗ ಸು. 64 ಕಿಮೀ ವೇಗದಲ್ಲಿ ಓಡಿದ ದಾಖಲೆಗಳುಂಟು. ಗುಂಪುಗುಂಪಾಗಿ ಕೂಡಿಕೊಂಡು ಬೇಟೆಯಾಡುತ್ತದೆ. ಸಾಕುಪ್ರಾಣಿಗಳನ್ನು ಹಿಡಿದು ತಿನ್ನು ವುದೆಂದು ಹೇಳುವರಾದರೂ ಅದು ಬಹಳ ವಿರಳ. ಕೆಲವು ವೇಳೆ ಹಣ್ಣುಹಂಪಲುಗಳನ್ನೂ ತಿನ್ನವುದುಂಟು. 
ತಾನೇನೆಲದಲ್ಲಿ ಗೂಡು ಕೊರೆದುಕೊಂಡು ಅಥವಾ ಇತರ ಪ್ರಾಣಿಗಳು ಮಾಡಿರುವ ನೆಲದ ಬಿಲಗಳನ್ನು ಇನ್ನೂ ಅಗಲ ಮಾಡಿಕೊಂಡು ಹಗಲಿನಲ್ಲಿ ಅಡಗಿಕೊಂಡಿರುತ್ತದೆ. ಇಂಥ ಗೂಡುಗಳಲ್ಲಿ, ಸಾಮಾನ್ಯವಾಗಿ ವಸಂತಋತುವಿನಲ್ಲಿ ಮರಿ ಹಾಕುತ್ತದೆ. ಒಂದು ಸೂಲಿಗೆ 6
-8 ಮರಿಗಳನ್ನು ಈಯುತ್ತದೆ. ಗಂಡು-ಹೆಣ್ಣು ಕಯೋಟುಗಳೆರಡೂ ಮರಿಗಳ ಪೋಷಣೆ ಮಾಡುತ್ತವೆ; ಆಜೀವಪರ್ಯಂತ ಗಂಡು ಹೆಣ್ಣುಗಳು ಒಟ್ಟಿಗೆ ವಾಸಿಸುತ್ತವೆ (ಇವುಗಳ ಆಯುಸ್ಸು ಸು. 13 ವರ್ಷಗಳು). ಒಂಟಿಯಾಗಿ ಅಥವಾ ಗುಂಪುಗಳಲ್ಲಿ ಪ್ರತಿ ಸಂಜೆ ಇವು ವಿಚಿತ್ರವಾಗಿ ಕೂಗುತ್ತವೆ. ಬೊಗಳುವಿಕೆ, ಅರಚುವಿಕೆ, ಹುಯ್ಯಲಿಡುವಿಕೆ, ನರಿಗಳಂತೆ ಊಳಿಡುವಿಕೆ ಮುಂತಾಗಿ ಹಲವು ವಿಧದ ಇದರ ಕೂಗು ಮುಸ್ಸಂಜೆಯಲ್ಲಿ ಕಾಡಿನಲ್ಲಿ ಒಂಟಿಯಾಗಿ ಹೋಗುವವರಿಗೆ ಭಯ ಹುಟ್ಟಿಸುವಂಥದು.                     	(ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ